ಮುಷ್ತಾಕ್ ಅಲಿ
	1914. ಭಾರತದ ಕ್ರಿಕೆಟ್ ಪಟು. ಶ್ರೇಷ್ಠ ಆಲ್‍ರೌಂಡ್ ಆಟಗಾರ. ಹುಟ್ಟಿದ್ದು ಇಂದೂರಿನಲ್ಲಿ. ಚಿಕ್ಕಂದಿನಿಂದಲೂ ಕ್ರಿಕೆಟ್ ಆಟದಲ್ಲಿ ಆಸಕ್ತಿ ತಳೆದವರು. ಹೆಸರಾಂತ ಕ್ರಿಕೆಟ್ ಆಟಗಾರ ಸಿ. ಎಸ್. ನಾಯುಡು ಇವರ ಸಹಪಾಠಿ. ಸಿ. ಎಸ್. ನಾಯುಡು ಅವರ ಅಣ್ಣ ಸಿ. ಕೆ. ನಾಯುಡು ಇವರ ಕ್ರಿಕೆಟ್ ಗುರು.

	ಅಲಿ, ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದು 1933-34ರಲ್ಲಿ. 1936ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತೀಯ ತಂಡದಲ್ಲಿ ಇವರಿದ್ದರು. ಆಗ ಮ್ಯಾಂಚೆಸ್ಟರ್‍ನಲ್ಲಿ ನಡೆದ ಎರಡನೆಯ ಟೆಸ್ಟ್‍ನಲ್ಲಿ ಆಡಿದ ಭಾರತದ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ ಕೇವಲ 203 ರನ್ನುಗಳಿಗೆ ಎಲ್ಲ ವಿಕೆಟ್‍ಗಳನ್ನೂ ಕಳೆದುಕೊಂಡಿತು. ಅದೇ ಇಂಗ್ಲೆಂಡ್ ತಂಡ ಎಂಟು ವಿಕೆಟ್‍ಗಳ ನಷ್ಟಕ್ಕೆ 571 ರನ್ನುಗಳನ್ನು ಗಳಿಸಿ ಭಾರತೀಯ ತಂಡ ಎರಡನೆಯ ಇನ್ನಿಂಗ್ಸ್ ಆಟವಾಡಲು ಅವಕಾಶ ಕಲ್ಪಿಸಿತು. ಬಹಳಷ್ಟು ರನ್ನುಗಳಿಂದ ಹಿಂದಿದ್ದ ಭಾರತಕ್ಕೆ ಕಡೆ ಆಟ ಆರಂಭಿಸಿದರು. ಇಡೀ ದಿವಸ ಆಡಿದ ಇವರಿಬ್ಬರಲ್ಲಿ ಯಾರೂ ಔಟಾಗದೆ 190 ರನ್ನುಗಳನ್ನು ಗಳಿಸಿದರು. ಅದರಲ್ಲಿ 102 ರನ್ನುಗಳನ್ನು ಅಲಿಯವರು ಮಾಡಿದ್ದರು. ಅಲಿಯವರ ಆಕರ್ಷಕ ಹೊಡೆತಗಳಿಂದ ಪ್ರೇಕ್ಷಕರು ಕುಣಿದಾಡಿದರು. ಮರುದಿವಸ ಮತ್ತೆ 10 ರನ್ನುಗಳನ್ನು ಮಾಡಿ ಔಟಾದರು. ಹೀಗೆ ಆರಂಭದ ಜೋಡಿ ಗಳಿಸಿದ 203 ರನ್ನುಗಳು ಆಗ ಇಂಗ್ಲೆಂಡ್-ಭಾರತ ಪಂದ್ಯಗಳಲ್ಲಿ ಭಾರತದ ದಾಖಲೆಯಾಯಿತು. ಆಗ ಇಂಗ್ಲೆಂಡ್-ಭಾರತ ಪಂದ್ಯಗಳಲ್ಲಿ ಭಾರತ ದಾಖಲೆಯಾಯಿತು. 1948-49ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿ 105ರನ್ನು ಗಳಿಸಿದರು. ಅನಂತರ ಭಾರತಕ್ಕೆ ಬಂದ ಕಾಮನ್ ವೆಲ್ತ್ ತಂಡದ ವಿರುದ್ಧ ಆಡಿದ ಅನಧಿಕೃತ ಟೆಸ್ಟ್‍ನ ಪ್ರಥಮ ಇನ್ನಿಂಗ್ಸ್‍ನಲ್ಲಿ 120ರನ್ನು ಬಾರಿಸಿದರು.

	ಹೋಳ್ಕರ್ ತಂಡದ ಪರವಾಗಿ ಆಡಿ. ಮಾಡಿದ 233 ರನ್ನುಗಳನ್ನು ಇವರ ವೈಯಕ್ತಿಕ ದಾಖಲೆ ಎನ್ನಬಹುದು. ಇವರು ಉತ್ತಮ ಬೌಲರ್ ಕೂಡಾ ಆಗಿದ್ದರು. 1936ರ ಟೆಸ್ಟ್ ಬಗೆಗೆ ಬರೆಯುತ್ತ ಇಂಗ್ಲೆಂಡಿನ ಕ್ರಿಕೆಟ್ ಪತ್ರಿಕೆ 'ವಿಸ್ಡೆನ್ ಅಲಿಯವರನ್ನು ಅತ್ಯುತ್ತಮ ಫೀಲ್ಡರ್ ಎಂದು ಕರೆಯಿತು.

	1956ರಲ್ಲಿ ಅಲ್ಲಿ ಪ್ರಥಮ ದರ್ಜೆ ಕ್ರಿಕೆಟ್‍ನಿಂದ ನಿವೃತ್ತರಾದರು. 1963ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿತು. 1973ರಲ್ಲಿ ಇಂಗ್ಲೆಂಡಿಗೆ ಹೋದ ಶಾಲಾ ಬಾಲಕರ ತಂಡಕ್ಕೆ ಇವರು ತರಬೇತಿ ನೀಡಿದರು.
(ಎ.ವಿ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ